ಸನ್ನತಿ
 	ಭಾರತದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಒಂದು ಗ್ರಾಮ. ಕರ್ನಾಟಕದಲ್ಲಿಯೇ ಅತ್ಯಂತ ಕುತೂಹಲಕರ ವಾದ, ವಿಸ್ತಾರವಾದ ಬೌದ್ಧನಿವೇಶನವುಳ್ಳ ಸ್ಥಳ. ಮದರಾಸು-ಮುಂಬಯಿ ರೈಲುಹಾದಿಯಲ್ಲಿರುವ ನಲ್ವಾರ್ ರೈಲುನಿಲ್ದಾಣ ದಿಂದ 6 ಕಿಮೀ ದೂರದಲ್ಲಿ ಭೀಮಾನದಿಯ ಎಡದಂಡೆಯ ಮೇಲಿದೆ. ಇಲ್ಲಿರುವ ಚಂದ್ರಲಾಂಬಾ ದೇವಾಲಯದಿಂದಾಗಿ ಈಗಲೂ ಈ ಗ್ರಾಮ ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು ಹೆಚ್ಚಿನ ಯಾತ್ರಿಕರನ್ನಾಕರ್ಷಿಸುತ್ತಿದೆ. ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ.

	ಭೀಮಾನದಿ ಈ ಸ್ಥಳದಲ್ಲಿ ಕೊಂಡಿಯಂತೆ ಸುತ್ತುಹಾಕಿ ಮುಂದೆ ಹರಿಯುವುದಷ್ಟೆ ಅಲ್ಲದೆ ತಕ್ಕಷ್ಟು ಆಳವಾಗಿಯೂ ಇದ್ದು ಜಲದುರ್ಗದಂತೆ ಸ್ವಾಭಾವಿಕ ರಕ್ಷಣೆಯನ್ನು ನೀಡಿರುವುದರಿಂದ ಇಲ್ಲಿ ಇತಿಹಾಸದ ಆರಂಭದ ಕಾಲದಿಂದಲೂ ಜನವಸತಿ ಇದ್ದು ಸಾತವಾಹನರ ಕಾಲದಲ್ಲಿ ತಕ್ಕಷ್ಟು ದೊಡ್ಡದಾದ ಬೌದ್ಧಕ್ಷೇತ್ರ ಬೆಳೆದು ಬಂದಿರುವುದು ವ್ಯಕ್ತವಾಗಿದೆ. ನದಿಯ ಹಿಮ್ಮುರಿ ತಿರುವಿನ ಒಂದು ಮೂಲೆಗೆ ಹೊಂದಿಕೊಂಡಂತೆ ಸಾತವಾಹನರ ಕಾಲದ ದಪ್ಪ ಇಟ್ಟಿಗೆಯಿಂದ ನೇರವಾಗಿ ಕಟ್ಟಿರುವ ಕೋಟೆಯ ಗೋಡೆ ಯೊಂದಿದ್ದು ಆರಂಭದಲ್ಲಿ ಅಲ್ಲಿ ಊರು ಬೆಳೆದಿರಬೇಕು. ಕಾಲಕ್ರಮದಲ್ಲಿ ಈ ಊರು ಬೆಳೆದು ಅಲ್ಲಿಂದ ಅರ್ಧ ಕಿಮೀಗೂ ಹೆಚ್ಚು ದೂರದಲ್ಲಿ ಮತ್ತೊಂದು ಜನವಸತಿಯಿದ್ದ ವಿಸ್ತಾರವಾದ ನಿವೇಶನವಿದೆ. ಈ ನಿವೇಶನದ ಮೇಲೆಯೇ ಈಗಿನ ಊರು ಬೆಳೆದಿದೆ. ಊರಿನ ಹೊರ ಭಾಗಕ್ಕೆ ಸೇರಿದಂತೆ ಬೌದ್ಧಸ್ತೂಪಗಳಿದ್ದ ಕುರುಹುಗಳು ಉಳಿದುಬಂದಿವೆ.  ಈ ಸ್ತೂಪಗಳ ನಿವೇಶನದ ಹತ್ತಿರವೇ ಚಂದ್ರಲಾಂಬಾ ದೇವಾಲಯ ವಿರುವುದು.

	5-6 ಚ.ಕಿಮೀ ವಿಸ್ತಾರವಾದ ಈ ನಿವೇಶನಗಳಲ್ಲಿ ಸಾತವಾಹನರ ಕಾಲದ ಇಟ್ಟಿಗೆಗಳು, ಕೆಂಪು-ಕಪ್ಪು ಹೊಳಪಿನ ಮಡಕೆ ಚೂರುಗಳು, ಮೃಣ್ಮೂರ್ತಿಗಳು, ಆಟಿಕೆಗಳು, ಮಣಿಗಳು, ಇತರ ಅವಶೇಷಗಳು ಹೇರಳವಾಗಿ ಚೆಲ್ಲಾಡಿವೆ. ಅಚ್ಚಿನಲ್ಲಿ ತಯಾರಿಸಿದ ಟೊಳ್ಳಾದ ಮೃಣ್ಮೂರ್ತಿ ಗಳು ಆಕರ್ಷಕವಾಗಿವೆ. ಕಿರು ಪ್ರಮಾಣದ ಈ ಮೂರ್ತಿಗಳಲ್ಲಿ ಯಕ್ಷ ಯಕ್ಷಿಯರು; ಸ್ತ್ರೀಪುರುಷ ಮೂರ್ತಿಗಳು; ತಮಟೆ ಬಾರಿಸುವವ; ಆನೆ, ಕುದುರೆ, ಸಿಂಹ, ಗೂಳಿ ಮೊದಲಾದ ಪ್ರಾಣಿಗಳು ಇದ್ದು ರಚನೆ, ಮಾಟ, ಅಂಗಸೌಷ್ಠವಗಳಿಂದ ಅಲಂಕರಣ ಆಭರಣಗಳು ಶಿರೋಭೂಷಣಗಳು ಸೂಕ್ಷ್ಮವಾಗಿ ಬಿಡಿಸಲ್ಪಟ್ಟಿವೆ.

	ಸ್ತೂಪಗಳಿದ್ದ ನಿವೇಶನದಲ್ಲಿ ಅದರ ಸುತ್ತಮುತ್ತಲೂ ನಾಶವಾಗಿರುವ ಬೌದ್ಧಸ್ತೂಪದ ನೂರಾರು ಅವಶೇಷಗಳು, ಶಿಲ್ಪಗಳು ಹರಡಿವೆ. ಹೊಲಗ ಳಲ್ಲಿ, ಮನೆಗಳ ಗೋಡೆಗಳಲ್ಲಿ, ದೇವಾಲಯದಲ್ಲಿ, ನದಿಗೆ ಹಾಕಿಸಿರುವ ಸೋಪಾನಪಂಕ್ತಿಗಳಲ್ಲಿ, ಎಲ್ಲೆಂದರಲ್ಲಿ ಬೌದ್ಧಶಿಲ್ಪದ ತುಣುಕುಗಳು, ಅವಕ್ಕೆ ಸೇರಿದ ಶಾಸನಗಳು, ಕಟ್ಟಡದ ಕಲ್ಲುಗಳು ಕಂಡುಬರುತ್ತವೆ.  ಇವುಗಳೊಂದಿಗೆ ಸ್ತೂಪವೊಂದಿದ್ದ ಸ್ಥಳದಲ್ಲಿಯೇ ಈಚೆಗೆ ಕಟ್ಟಿರುವ ಒಂದು ಚಿಕ್ಕದಾದ ದುರ್ಗಿಯ ಗುಡಿಗೆ ಉಪಯೋಗಿಸಿರುವುದು ಪೂರ್ತಿಯಾಗಿ ಸ್ತೂಪಕ್ಕೆ ಸೇರಿದ್ದ ಶಿಲ್ಪಗಳು ಮತ್ತು ಇತರ ಕಲ್ಲುಗಳು.  ಇಲ್ಲಿದ್ದ ಸ್ತೂಪ ಸಂಪೂರ್ಣವಾಗಿ ನಾಶವಾಗಿದ್ದು ಅದರ ವೃತ್ತಾಕಾರದ ವಿನ್ಯಾಸದ ತಳಹದಿ ಮಾತ್ರ ಉಳಿದಿದೆ ಮತ್ತು ಗುಂಡಾಗಿ ಮೇಲೆದ್ದಿರ ಬಹುದಾದ ಸ್ತೂಪದ ಅಂಡಭಾಗದ ಹೊರಮೈಗೆ ಸೇರಿಸಿದ್ದ ಕೆಲವು ಶಿಲ್ಪಗಳು ಮಾತ್ರ ಅವುಗಳು ಮೂಲದಲ್ಲಿದ್ದ ಸ್ಥಳದಲ್ಲಿಯೇ ಉಳಿದಿವೆ.  ಅವುಗಳಲ್ಲಿ ಒಂದು ಫಲಕದ ಮೇಲೆ ಸಂತೋಷದಿಂದ ಚಿಮ್ಮಿ ನೆಗೆಯುತ್ತಿರುವ ಕೊಬ್ಬಿದ ಕೋಣ, ಅದನ್ನು ಹಿಂಬಾಲಿಸುತ್ತಿರುವ ರೆಕ್ಕೆಯುಳ್ಳ ಕುದುರೆಗಳಿದ್ದು ಪ್ರಾಣಿಗಳನ್ನು ಅತ್ಯಂತ ಸ್ವಾಭಾವಿಕವಾಗಿ ಶಿಲ್ಪಿಸಿರುವುದು ಕಂಡುಬರುತ್ತದೆ. ಈಗಿನ ಸ್ಥಿತಿಯಲ್ಲಿ ಆ ಸ್ತೂಪದ ರೂಪರೇಖೆಗಳನ್ನು ಗುರುತಿಸುವುದು ಅಸಾಧ್ಯವಾದರೂ ಅದು ಗುಂಡಾಗಿ ಮೇಲೆದ್ದಿದ್ದು ಕಲ್ಲುಗಳಿಂದಲೇ ನಿರ್ಮಿತವಾಗಿ ಹೊರಮುಖಕ್ಕೆ ನಯಗೊಳಿಸಿದ ಶಿಲ್ಪಿಸಿದ ಚಪ್ಪಡಿಗಳನ್ನು ಜೋಡಿಸಲಾಗಿತ್ತೆಂದು ತಿಳಿಯಲವಕಾಶ ವಿದೆ. ಅಮರಾವತಿ, ನಾಗಾರ್ಜುನಕೊಂಡಗಳಲ್ಲಿ ಇದ್ದಂತೆ ಈ ಸ್ತೂಪಕ್ಕೂ ಆಯಕಸ್ತಂಭಗಳನ್ನು ನಿಲ್ಲಿಸಿದ್ದರೆಂಬುದು ಅಲ್ಲಿ ದೊರೆತ ಕೆಲವು ಆಯಕ ಸ್ತಂಭಗಳಿಂದ ಊಹಿಸಬಹುದು. ಆದರೆ ಕಟಾಂಜನಗಳಿ ದ್ದುವೇ ಎಂಬುದನ್ನು ಹೇಳಲಾಗದು. ಸ್ತೂಪದಲ್ಲಿ ಧಾತುಗರ್ಭವಿದ್ದ ಶಿಲಾ ಸಂಪುಟವೂ ಒಡೆದು ಬಿದ್ದಿದೆ. ಗುಂಡಾದ ಈ ಶಿಲಾಸಂಪುಟದ ಮೂರು ಕಡೆ ಬಹುಶಃ ಅದನ್ನು ಮಾಡಿಸಿದ ಭಕ್ತರ ಮೂರ್ತಿಗಳನ್ನು ಬಿಡಿಸಿದೆ. ಹೊಲವೊಂದರಲ್ಲಿ ಬಿದ್ದಿದ್ದ ಆಯಕಸ್ತಂಭವೊಂದರ ಮೇಲೆ ಸುಖಾಸೀನ ರಾಗಿ ಕುಳಿತ ದಂಪತಿಗಳಿದ್ದು ಅವರ ಉಪಚಾರಕ್ಕಾಗಿ ಕಾದಿರುವ ಇಬ್ಬರು ಸೇವಕ-ಸೇವಕಿಯರ ಮೂರ್ತಿಗಳನ್ನು ಅದರ ಕೆಳಗೆ ಬಿಡಿಸಿದೆ. ತೆಳುಉಬ್ಬುಶಿಲ್ಪದಲ್ಲಿ ಬಿಡಿಸಿದ್ದು ಮುಖದಲ್ಲಿ ಮಿನುಗುವ ಮಂದಹಾಸ, ಪಾನಪಾತ್ರೆ ಹಿಡಿದ ಗಂಡು ಕುಳಿತಿರುವ ವಿಲಾಸಭಂಗಿ, ಸುಖಲೋಲು ಪತೆಗಳನ್ನು ಹೊಮ್ಮಿಸುವ ಅಂಗಸೌಷ್ಠವಗ ಳಿಂದ ಕೂಡಿದ್ದು ಸಂವೇದನಾ ಶೀಲತೆಯುಳ್ಳ ಜೀವಂತಶಿಲ್ಪವನ್ನಿಲ್ಲಿ ಕಾಣಬಹುದು. ಸುತ್ತಮುತ್ತಲೂ ಹರಡಿರುವ ಶಿಲ್ಪಫಲಕಗಳಲ್ಲಿ ಬೋಧಿವೃಕ್ಷ ಸಿಂಹಾಸನ ಮತ್ತು ಬುದ್ಧ ಪಾದಗಳನ್ನುಳ್ಳ ಶಿಲ್ಪ; ಬುದ್ಧನ ಜನನ; ನಂದಿವಿಶಾಲಜಾತಕವೇ ಮೊದಲಾದ ಜಾತಕಕಥೆಗಳಿವೆ; ದತ್ತಿ ಬಿಟ್ಟವರ ಮೂರ್ತಿಗಳಿವೆ; ಛಾಯಾಶಿಲ್ಪಗಳಿವೆ; ಬನವಾಸಿಯ ನಾಗಶಿಲ್ಪ ದಂತಿರುವ, ಆದರೆ ಶಾಸನವಿಲ್ಲದ ನಾಗರ ಕಲ್ಲುಗಳೂ ಇವೆ. ಗುಂಡುಪದ್ಮ ಗಳೂ ಅರೆಪದ್ಮಗಳೂ ಇವೆ. ಶಿಲ್ಪಕ್ಕೆ ಅಷ್ಟೇನೂ ಅನುಕೂಲವಲ್ಲದ ಮತ್ತು ಉತ್ತಮ ದರ್ಜೆಯದೂ ಅಲ್ಲದ ಹಸಿರು ಬೆರೆತ ಬಿಳಿಯ ಸುಣ್ಣಕಲ್ಲನ್ನು ಈ ಶಿಲ್ಪಗಳಿಗೆ ಬಳಸಿಕೊಂಡಿದ್ದರೂ ಅಮರಾವತಿಯ ಶಿಲ್ಪಗಳ ಸೊಗಸನ್ನು ಇವುಗಳಲ್ಲಿ ಕಾಣಬಹುದು.  ತೆಳುಉಬ್ಬಿನಲ್ಲಿಯೇ ಆದರೂ ಸಾಂಸಾರಿಕ ಚಿತ್ರಣಗಳಿರುವ ಕೆಲವು ಫಲಕಗಳಲ್ಲಿ ಶ್ರೀಮಂತ ವರ್ಗದ ಗಂಡುಹೆಣ್ಣುಗಳ ವಿಲಾಸ ರಸಿಕತೆಗಳನ್ನು, ಮಧುರಭಾವನೆಗ ಳನ್ನು ಮೂರ್ತಿಗಳ ಬಾಗುಬಳುಕುಗಳಲ್ಲಿ ತಂದಿರುವ ರೂವಾರಿಗಳ ಜಾಣ್ಮೆ ಮೆಚ್ಚುವಂಥದು.

	ಇಲ್ಲಿ ಸು. 50 ಚಿಕ್ಕ ಶಾಸನಗಳು ದೊರೆತಿವೆ. ಇವುಗಳಲ್ಲಿ ಅನೇಕವು ಕೇವಲ ತುಂಡು ಶಾಸನಗಳು. ಲಿಪಿಯ ಆಧಾರದಿಂದ ಇವು ಕ್ರಿ.ಪೂ. ಸು.1ನೆಯ ಶತಮಾನದಿಂದ ಕ್ರಿ.ಶ. 3ನೆಯ ಶತಮಾನದ ವರೆಗಿನ ಕಾಲಕ್ಕೆ ಸೇರುತ್ತವೆ.  ಎರಡು-ಮೂರು ಶಾಸನಗಳನ್ನು ಬಿಟ್ಟರೆ ಉಳಿದವು ಬ್ರಾಹ್ಮೀಲಿಪಿಯಲ್ಲಿದ್ದು ಪ್ರಾಕೃತ ಭಾಷೆಯಲ್ಲಿವೆ. ಇವುಗಳೊಂದಿಗೆ ಬಾದಾಮಿ ಚಳುಕ್ಯರ ಕಾಲಕ್ಕೆ ಸೇರಿದ ಎರಡು ಶಾಸನಗಳೂ ಉಂಟು.  ಬ್ರಾಹ್ಮೀಶಾಸನಗಳಲ್ಲಿ ಗಿರಿಜತಣಕ, ಸಿವತಣಕ, ಸೋಮಫೋಸನಿಕ, ಭಟಿಬಾಲಿಕಾ, ಪುರಿಸದತ, ಗಗನಕ ಆತನ ಭಾರ್ಯೆ ರಾಮಸಿರಿಯ ಗಹಪತಿ ಸುಲಸ, ವಣಿಯ ಸೇನಣ್ಣ ಮೊದಲಾದ ಅನೇಕರ ಹೆಸರುಗಳಿವೆ.  ಇವರು ಬಹುಶಃ ಅಲ್ಲಿನ ಸ್ತೂಪಗಳಿಗೆ ದತ್ತಿ ಬಿಟ್ಟವರಾಗಿರಬಹುದು.  ಇವರ ಜೊತೆಯಲ್ಲಿ ಒಂದು ತುಂಡು ಶಾಸನದಲ್ಲಿ `ವಾಸಿಠೀಪುತಸಿರಿಸ  ಎಂದಿದ್ದು ಅದು ಸಾತವಾಹನ ವಂಶಕ್ಕೆ ಸೇರಿದ ವಾಸಿಷ್ಠೀಪುತ್ರ  ಶ್ರೀಸಾತಕರ್ಣಿಯನ್ನು ಕುರಿತದ್ದಾಗಿದೆ.

	ಈ ಸ್ಥಳದಲ್ಲಿ ಎತ್ತರವಾದ ಕೆಲವು ದಿಬ್ಬಗಳಿವೆ. ಬಹುಶಃ ಸ್ತೂಪಗಳ ಅವಶೇಷಗಳನ್ನೊಳಗೊಂಡಿರಬಹುದಾದ ಈ ದಿಬ್ಬಗಳ ಉತ್ಖನನದಿಂದ ಕರ್ನಾಟಕದಲ್ಲಿನ ಬೌದ್ಧವಾಸ್ತುಶಿಲ್ಪದ ಬಗೆಗೆ ಹೆಚ್ಚಿನ ಬೆಳಕು ಬೀಳಬಹುದು.

	ಬಹುಶಃ ಬೌದ್ಧಧರ್ಮ ಇಲ್ಲಿ ಕ್ಷೀಣಿಸಿದಮೇಲೆ ರಾಷ್ಟ್ರಕೂಟರ ಕಾಲದಲ್ಲಿ ಶಕ್ತಿದೇವತೆಯ ದೇವಾಲಯವೊಂದು ಸ್ತೂಪಕ್ಕೆ ಸ್ವಲ್ಪ ದೂರದಲ್ಲಿಯೇ ನಿರ್ಮಿತವಾಯಿತು. ಈ ದೇವಾಲಯವೂ ಮುಂದೆ ಪುನರ್ನಿರ್ಮಾಣಗೊಂಡು ಬೇರೆ ಬೇರೆ ಭಾಗಗಳನ್ನೊಳಗೊಂಡು ವಿಸ್ತರಿ ಸಲ್ಪಟ್ಟು ಚಂದ್ರಲಾಂಬಾ ದೇವಾಲಯವೆಂದು ಪ್ರಸಿದ್ಧವಾಗಿದೆ. ಈಗ ಆ ದೇವಾಲಯದಲ್ಲಿರುವ ಗರ್ಭಗೃಹದ ಬಾಗಿಲುವಾಡ, ಗರ್ಭಗೃಹದ ಪಕ್ಕದಲ್ಲಿ ಮತ್ತೊಂದು ಕೋಣೆಯಲ್ಲಿ ಈಗ ಪೂಜೆಯಿಲ್ಲದೆ ಇರುವ ಬೃಹತ್ ಪ್ರಮಾಣದ ಭವ್ಯವಾದ ದೇವಿಯ ಮೂರ್ತಿ, ಕೆಲವು ಕಂಬಗಳು ರಾಷ್ಟ್ರಕೂಟ ಶಿಲ್ಪದ ಸುಂದರ ಮಾದರಿಗಳು.  ಬಾಗಿಲುವಾಡದ ಎರಡು ಕಡೆಯ ದಾರವಂದಗಳು ಕೆಳಗೆ ಇರುವ ಗಣಪತಿ, ಮಹಿಷಾಸುರಮರ್ದಿನಿ ಮೂರ್ತಿಗಳನ್ನು ಗಮನಿಸಬೇಕು; ಹಾಗೆಯೇ ಊರಿನೊಳಗೆ ಬಿದ್ದಿರುವ ತ್ರುಟಿತವಾದ ಸೂರ್ಯನ ಮೂರ್ತಿಯೂ ಇದೇ ಗುಂಪಿಗೆ ಸೇರಿದುದು.  ಈಚೆಗೆ ನಿರ್ಮಿತವಾದ ಸೂಗಪ್ಪನ ಸಮಾಧಿ ಎಂಬ ಸಂತನೊಬ್ಬನ ಸಮಾಧಿಕಟ್ಟಡ ಊರಿನೊಳಗಿರುವ ಮುಸ್ಲಿಂ ಶೈಲಿಯಲ್ಲಿರುವ ತಗ್ಗಾದ ಗುಮ್ಮಟವನ್ನು ಹೊಂದಿದ ಚೌಕವಿನ್ಯಾಸದಲ್ಲಿರುವ ಚಿಕ್ಕದಾದ ಕಟ್ಟಡ.								
			(ಎಮ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ